ಅರ್ಥ 2

ದರ್ಶನ ಮತ್ತು ಮನಶ್ಯಾಸ್ತ್ರಗಳಲ್ಲಿನ ಅತ್ಯಂತ ಜಟಿಲವಾದ ಸಮಸ್ಯೆಗಳಲ್ಲೊಂದು. ತುಂಬ ಬಳಕೆಯಲ್ಲಿದ್ದರೂ ಯಾರಿಗೂ ಸರಿಯಾಗಿ ಅರ್ಥವಾಗದ ಶಬ್ದ (ಮೀನಿಂಗ್).

ಅರ್ಥ ಶಬ್ದಕ್ಕೆ ಅನೇಕಾರ್ಥಗಳಿವೆಯೆಂದು ಈ ಜಿಜ್ಞಾಸೆಯನ್ನು ಪ್ರಾರಂಭಿಸಬಹುದು. ಎಷ್ಟು ಶಾಸ್ತ್ರಗಳಿವೆಯೋ ಅಷ್ಟು ಅರ್ಥವಿದೆ, ಈ ಶಬ್ದಕ್ಕೆ ಎಂದು ಹೇಳಿದರೂ ಸಮರ್ಪಕವಾಗದು. ಏಕೆಂದರೆ ಯಾವ ಒಂದೇ ಶಾಸ್ತ್ರದಲ್ಲೂ ಈ ಪದಕ್ಕೆ ಏಕಮುಖವಾದ ಅರ್ಥವಿಲ್ಲ. ಒಂದು ಪದದ ಅರ್ಥವೇನೆಂಬುದನ್ನು ನಿರ್ಧರಿಸಲು ಇಡೀ ಜೀವಮಾನವಾದರೂ ಸಾಕಾಗದಿರಬಹುದು. ಹುಡುಕ ಹೊರಟವರು ನಿರಾಸೆಯಿಂದ ಕೊನೆಗೆ ಇದು ನಮ್ಮ ಅರ್ಥ ಎಂದಂದುಬಿಡಬಹುದು. ಯಾವುದರ ಅರ್ಥವಾಗಲಿ ಅರ್ಥೈಸುವ ವ್ಯಕ್ತಿಯನ್ನವಲಂಬಿಸಬೇಕಾಗುತ್ತದೆ. ಅರ್ಥದ ಅರ್ಥವನ್ನು ಹೇಳಹೊರಟ ತಜ್ಞರು ಹದಿನಾರು ವಿವರಣೆಗಳನ್ನು ನೀಡಿದ್ದಾರೆಂದರೆ ಆಶ್ಚರ್ಯವಾಗದಿರದು.

ಈ ಗೊಂದಲ, ವಾದವಿವಾದಗಳಿಂದ ಆಯ್ದ ಕೆಲವು ಸ್ಥೂಲ ನಮೂನೆಗಳನ್ನು ನೋಡಬಹುದು.

1. ಯಾವುದಾದರೂ ಒಂದು ಪ್ರಸಂಗದ, ಸಂಗತಿಯ, ಸೂಚನೆ ಸಂಕೇತ: ಉದಾಹರಣೆ, ಬ್ಯಾರೊಮೀಟರಿನ ಪಾದರಸ 
ಇಳಿದರೆ ಮಳೆ ಬರುತ್ತದೆ. ಹುಣ್ಣಿಮೆ ಎಂದರೆ ಉಬ್ಬರವಿಳಿತಗಳಾಗುತ್ತವೆ. ಪಾವ್‍ಲೋವ್‍ನ ಸಿದ್ಧಾಂತದಂತೆ ಗಂಟೆ ಎಂದರೆ ಆಹಾರ. ಅಂದರೆ xಎಂಬ ತತ್ತ್ವ ಥಿ ಆಗಬಹುದಾದರೆ x ಮತ್ತು ಥಿ ಗಳಿಗೆ ನಿಕಟ ಸಂಬಂಧವೇರ್ಪಟ್ಟು x ಆದಾಗಲೆಲ್ಲ  ಥಿ ಆಗಬೇಕೆಂಬ ತರ್ಕ ಬಲಗೊಳ್ಳುತ್ತದೆ.

2. ಸ್ವಯಂಪ್ರೇರಿತವಾದ ಕ್ರಿಯೆಯ ಆಶಯ, ಗುರಿ, ಉದ್ದೇಶ: ಅವನ ಅರ್ಥ ಕೆಟ್ಟದ್ದಲ್ಲ. ಅವನ ಅರ್ಥ ಒಳ್ಳೆಯದು. ಯಾಂತ್ರಿಕವಾದ ಜಗತ್ತು ಅರ್ಥವಿಲ್ಲದ್ದು ಎನ್ನುವಾಗ ಇದು ಸ್ಪಷ್ಟವಾಗಿದೆ.

3. ನಾವು ಇಟ್ಟುಕೊಂಡಿರುವ ಸಂಕೇತ ಏನನ್ನು ಸೂಚಿಸುತ್ತದೋ ಅದು: 1. ಬೋದಾರ್ಥ: ಅನುಭವೈಕ ಪ್ರಾಮಾಣ್ಯವುಳ್ಳ ಪ್ರಮೇಯಗಳಿಂದ ತಿಳಿದುಬರುವ ಅಂಶಗಳು. ಅವು ನಿಜವಿರಬಹುದು, ಸುಳ್ಳಿರಬಹುದು. ಉದಾ: ಸತತಾಭ್ಯಾಸದಿಂದ ನೆನಪಿಗೆ ತಂದುಕೊಳ್ಳುವುದಕ್ಕಿಂತ ಹೆಚ್ಚಿನ ಅಂಶಗಳನ್ನು ಗುರುತುಹಿಡಿಯಬಹುದು.  2. ನಿರ್ದೇಶಾರ್ಥ:  ಆಜ್ಞೆ , ಕೋರಿಕೆಗಳನ್ನೂ ಹೇಳುವಂಥದು. ಉದಾ. ನೀನು ಕೊಲ್ಲಕೂಡದು.  3. ಭಾವೋದ್ವೇಗಸೂಚಕಾರ್ಥ: ನಿರ್ದಿಷ್ಟವಾಗಿ ಏನನ್ನೂ ಸೂಚಿಸದಿದ್ದರೂ ಅಲ್ಲಿನ ಉದ್ರೇಕ ಸ್ಪಷ್ಟ. ಚೆನ್ನಾಗಿದೆ, ಸುಂದರ, ತುಂಬ ಕೆಟ್ಟಿದೆ ಎಂಬುವು ಉದಾಹರಣೆಗಳು. 4. ಒಂದು ಹೇಳಿಕೆಯಲ್ಲಿ ಈ ಅರ್ಥಗಳೆಲ್ಲವೂ ಇರಬಹುದು. ಜೊತೆಗೆ ಇತರ ವಿಧವಾದ ಅರ್ಥಗಳೂ ಇರಬಹುದು. ಉದಾಹರಣೆ : ಜನಪ್ರಿಯನಾದ ಒಬ್ಬ ನಾಯಕನ ಭಾಷಣ ಅಥವಾ ಪತ್ರಿಕಾಲೇಖನ. ಅನೇಕ ವೇಳೆ ಒಂದು ಹೇಳಿಕೆಯ ಅರ್ಥ ಅಂದಿನ ಪರಿಸ್ಥಿತಿಯನ್ನವಲಂಬಿಸಿದ್ದು ಅದು ಬದಲಾದಂತೆಲ್ಲ ಮತ್ತು ಹೇಳುವವರ, ಕೇಳುವವರ ಮನಃಸ್ಥಿತಿಗಳನ್ನವಲಂಬಿಸಿ ಬದಲಾವಣೆ ಹೊಂದುತ್ತಿರುತ್ತದೆ. ಹಾಸ್ಯ ಲೇಖನ ಅಥವಾ ನಗೆಗಾರನೆಂದು ಪ್ರಖ್ಯಾತನಾದವನೊಬ್ಬ ಎಂಥ ಗಂಭೀರವಾದ ಮಾತನ್ನೇ ಆಡಲಿ ಅದು ನಗೆಯನ್ನೇ ಬರಿಸಬಹುದು. ಈ ಬಗೆಯ ವಿವೇಚನೆಯನ್ನು ಸಂಕೇತಗಳ ಸಾಮಾನ್ಯ ಸಿದ್ಧಾಂತವನ್ನು ಕುರಿತ ಶಾಸ್ತ್ರದ (ಸೆಮಿನೋಟಿಕ್ಸ್) ಅಂಗವಾದ ಫಲಪ್ರಮಾಣಶಾಸ್ತ್ರದಲ್ಲಿ (ಪ್ರಾಗ್ಮ್ಯಾಟಿಕ್ಸ್) ನಡೆಸಲಾಗುತ್ತದೆ. ಆದರೆ, ಮುಖ್ಯವಾದ ಕೆಲವು ತಾರ್ಕಿಕವಾದಗಳನ್ನು ನಡೆಸುವುದಕ್ಕಾಗಿಯೂ ನಿಘಂಟುಗಳ ರಚನೆಯೇ ಮೊದಲಾದ ಕೆಲವು ಭಾಷಾಶಾಸ್ತ್ರದ ಪ್ರಕಟಣಗಳಿಗಾಗಿಯೂ ಶುದ್ಧ ಶಬ್ದಾರ್ಥ ವಿಜ್ಞಾನಲಬ್ಧವಾದ ಅರ್ಥವನ್ನು ಸ್ವೀಕರಿಸುವುದು ಮೇಲು. ಇದರಿಂದ ಸಂಕೇತಗಳನ್ನು ಉಪಯೋಗಿಸುವವರಾರೆಂಬ ಪರಿಗಣನೆ ತಪ್ಪಿ ಹೋಗಿ ಒಂದು ಶಬ್ದದ ಅರ್ಥ ಒಂದು ವಸ್ತು, ಗುಣ ಅಥವಾ ಶಬ್ದದಿಂದ ಸೂಚಿತವಾದಷ್ಟಕ್ಕೆ ಮಾತ್ರ ಸೀಮಿತವಾಗುತ್ತದೆ. ಆಗ ಶಬ್ದಾರ್ಥ ವಿಜ್ಞಾನದಿಂದ ಉದಿಸುವ ಅರ್ಥ ಸಂಕೇತಗಳಿಗೂ ಅವು ಯಾವುದನ್ನು ಸೂಚಿಸುತ್ತವೋ ಅವಕ್ಕೂ ಇರುವ ಸಂಬಂಧಕ್ಕೆ ಮಾತ್ರ ಅನ್ವಯಿಸುತ್ತದೆ.

ಅನೇಕರು ಅರ್ಥ ಎರಡು ಬಗೆಯದು ಎನ್ನುತ್ತಾರೆ. ಒಂದು ಅದರ ನಿರ್ದೇಶನಾರ್ಥ (ಡಿನೋಟೇಷನ್). ಇನ್ನೊಂದು ಅದರ ಲಕ್ಷಣಸೂಚಕಾರ್ಥ (ಕಾನೊಟೇಷನ್). ಒಂದು ಶಬ್ದ ಒಂದು ವಸ್ತುವನ್ನು ನಿರ್ದೇಶಿಸುವಂತೆ ಅದರ ಗುಣವನ್ನು ಸೂಚಿಸುತ್ತದೆ. ಒಂದು ಪದದ, ನಿರ್ದೇಶನಾರ್ಥ ಯಾವುವೆಂದರೆ ಆ ಶಬ್ದ ಯಾವುದರ ಕಡೆಗೆ ಬೆರಳಿಟ್ಟು ತೋರಿಸುತ್ತದೋ ಅದು. ಲಕ್ಷಣಸೂಚಕಾರ್ಥ ಗುಣಗಳನ್ನು ಕುರಿತು ಹೊರಡುತ್ತವೆ. ಭಾವನೆಗಳು, ಸಂವೇದನೆಗಳು, ಕಾರ್ಯಪ್ರವೃತ್ತಿಗಳು ಮತ್ತು ಅರ್ಥದಲ್ಲಿ ಅಡಗಿರುವ ಇತರ ಮನಃಪ್ರವೃತ್ತಿಯ ಅಂಶಗಳು ಇವುಗಳತ್ತ ಸಾಗುತ್ತವೆ

ಒಂದು ಅರ್ಥಛಾಯೆಯನ್ನುಳ್ಳ ಭಾಷಾರೂಪಗಳಿಗೆ ಪರ್ಯಾಯ ಪದಗಳೆಂದು (ಸಿನೊನಿಮ್ಸ್) ಹೆಸರು. ಉದಾಹರಣೆ, ತಂದೆ ತಾಯಿಗಳ ತಾಯಿ ಅಜ್ಜಿ. ಒಂದು ಶಬ್ದದ ಅಥವಾ ಪದಪುಂಜದ ಅರ್ಥವನ್ನು ವಿವರಿಸುವುದರಲ್ಲಿ ಸಾಮಾನ್ಯವಾಗಿ ಅದರ ಆಶಯವನ್ನು ಹೇಳಲು ಅದಕ್ಕೆ ಸಮಾನಾರ್ಥವುಳ್ಳ ಅಥವಾ ಪರ್ಯಾಯವಾದ ಪದಗಳ ಮೂಲಕ ಅದರ ಲಕ್ಷಣವನ್ನು ವಿವರಿಸುತ್ತೇವೆ. ಒಂದು ಶಬ್ದವನ್ನು ಅನೇಕ ಆಶಯಗಳನ್ನು ವ್ಯಕ್ತಪಡಿಸುವುದಕ್ಕೆ ಉಪಯೋಗಿಸಿದ್ದೇ ಆದರೆ ಅದು ಸಂದಿಗ್ಧಾರ್ಥಕವೆನಿಸುತ್ತದೆ. ಇದಕ್ಕೆ ಈ ವಿವೇಚನೆಯ ವಸ್ತುವಾದ ಅರ್ಥ ಎಂಬ ಪದವೇ ಉತ್ತಮ ಉದಾಹರಣೆ.

ಪ್ರಾಯೋಗಿಕವಾಗಿ ಸಮರ್ಥಿಸಬಲ್ಲ ಹೇಳಿಕೆಗಳು ಮಾತ್ರ ಅರ್ಥವುಳ್ಳವು. ಇವು ವಾಸ್ತವಿಕತಾತತ್ತ್ವ ಪ್ರತಿಪಾದಕರಾದ ತಾರ್ಕಿಕರ ಮತ.

ಈ ವಿಷಯದ ಬಗ್ಗೆ ಅವರಲ್ಲೂ ಒಮ್ಮತವಿದ್ದಂತಿಲ್ಲ. ಈ ಎಪ್ಪತ್ತು ವರ್ಷಗಳಲ್ಲಿ ಈ ವಿಷಯ ಬಹು ಮುಖ್ಯವಾಗಿ ಅವರೆಲ್ಲರ ಗಮನವನ್ನು ಸೆಳೆದಿದೆ. ಎಫ್. ಸಿ. ಬುರ್ಟ್‍ಲೆಟ್ಟನ ಪ್ರಕಾರ ಮನುಷ್ಯ ಅರಿಯುವ ಪ್ರಯತ್ನ ಮಾಡುವಾಗಿನ ಸಮೀಕ್ಷಣೆ, ಕಲ್ಪನೆ, ಆಲೋಚನೆ ಮತ್ತು ತಾರ್ಕಿಕಾನುಮಿತಿಗಳು ಆತನ ಅರ್ಥಪ್ರವೃತ್ತ  ಪ್ರಯತ್ನಗಳು.
ಪಾವ್‍ಲೋವ್‍ನ ಔಪಾಧಿಕತೆಯನ್ನು ಮುಗ್ಧವಾಗಿ ಅನ್ವಯಿಸುವುದರಿಂದ ಗಂಟೆ ಎಂದರೇನೇ ಅನ್ನ ಎಂಬ ಅರ್ಥ ಸ್ಫುರಿಸುತ್ತದೆ. ವಾಟ್ಸನ್ ಮುಂತಾದ ಹಿಂದಿನ ಕಾಲದ ವರ್ತನಾವಾದಿಗಳು (ಬೆಹೇವಿಯರಿಸ್ಟ್ಸ್) ಸಂಕೇತಸೂಚಿತವಸ್ತುಗಳು ಮೊದಲು ಯಾವ ಪ್ರತಿಕ್ರಿಯೆಯನ್ನು ಹುಟ್ಟಿಸಿದವೊ ಆ ಸಂಕೇತಗಳಿಗೆ ಆಯಾ ಅರ್ಥಗಳು ಕೂಡಿಕೊಂಡಿರುತ್ತವೆ ಎಂದು ಹೇಳುತ್ತಾರೆ. ಆದರೆ ಈ ದೃಷ್ಟಿ ತುಂಬ ಸರಳವಾದದ್ದು. ಸಂಕೇತಗಳು ಪ್ರತಿನಿಧಿಸುವ ವಸ್ತುಗಳಿಗೆ ಒಂದು ಜೀವಿ ತೋರುವ ಬಾಹ್ಯ ಪ್ರತಿಕ್ರಿಯೆಯನ್ನು ಅದು ಎಂದಿಗೂ ಆ ಸಂಕೇತಗಳಿಗೆಯೇ ತೋರಿಸುವುದಿಲ್ಲ. ನಾಯಿ ಗಂಟೆಯನ್ನು ತಿನ್ನುವುದಿಲ್ಲ !

ಆಲೋಚನೆ ಯಾವುದೋ ಒಂದು ವಿಚಿತ್ರ ರೀತಿಯಲ್ಲಿ ತನ್ನ ಅರ್ಥವನ್ನು ಪ್ರಕಟಗೊಳಿಸುತ್ತದೆ ಎಂದು ಅನೇಕ ವೇಳೆ ಭಾವಿಸಲಾಗುತ್ತದೆ. ಅರ್ಥವೆಂಬುದು ಒಂದು ವಿಚಾರದ ಅಥವಾ ವಿಷಯದ ಬೋಧೆಯ ಪ್ರಮುಖಾಂಶ, ಅರ್ಥೈಸುವಾಗ ತತ್‍ಕ್ಷಣದಲ್ಲಿ ಮಿದುಳಿಗೆ ಸಂಬಂಧವೇರ್ಪಡಬೇಕಾಗಿಲ್ಲವೆಂದು ಮೆಗ್ಡುಗಲ್ಲನ ಅಭಿಪ್ರಾಯ. ವರ್ತನಾವಾದಿ ವಾಸ್ತವವಾಗಿ ಅರ್ಥವನ್ನು ಯಾವ ಅರ್ಥದಲ್ಲೂ ಮನಸ್ಸಿಗೆ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಏಕೆಂದರೆ ವರ್ತನಾವಾದಿತತ್ತ್ವದ ಪ್ರಕಾರ, ನಿಷ್ಕøಷ್ಟವಾಗಿ ವಿಶ್ಲೇಷಿಸಿ ವ್ಯಾಖ್ಯಾನಿಸುವುದಾದರೆ, ಆಲೋಚನೆ ಕೂಡ ಸ್ನಾಯುವಿನ ಒಂದು ಕಾರ್ಯವಷ್ಟೇ ಹೊರತು ಬೇರೇನೂ ಅಲ್ಲ. ಅವರು ಹೇಳುವ ಹಾಗೆ, ನಾವು ನಮ್ಮ ಸ್ನಾಯುವಿನೊಡನೆ ಆಲೋಚಿಸುತ್ತೇವೆ. ಮತ್ತು ಆಲೋಚನೆ ಎಂಬುದು ಅಪ್ರಕಟವಾದ ಮಾತು ಅಷ್ಟೆ.

ಇಲ್ಲಿ ಟಿಚ್ನರ್ ಅರ್ಥದ ವಿಷಯದಲ್ಲಿ ಪ್ರತಿಪಾದಿಸಿರುವ ಸಾಂದರ್ಭಿಕ ಸಿದ್ಧಾಂತದ (ಕಾಂಟೆಕ್‍ಸ್ಟ್ ಥಿಯೊರಿ) ವಿಚಾರವನ್ನು ಕುರಿತು ಪ್ರಸ್ತಾಪಿಸಬಹುದು. ಮನಶ್ಯಾಸ್ತ್ರದ ಪ್ರಕಾರ ಅರ್ಥವೆಂದರೆ ಸಂದರ್ಭ, ಅನುಭವದ ಮುಖ್ಯಾಂಶಗಳು. ಪ್ರತ್ಯಕ್ಷಾನುಭವ ಮತ್ತು ಪ್ರತಿರೂಪಗಳು ಸಂದರ್ಭ, ಸಂಬಂಧಗಳ ಮೂಲಕ ಅರ್ಥವನ್ನು ಪಡೆದುಕೊಳ್ಳುತ್ತವೆ.
ಪ್ರತ್ಯಕ್ಷಾನುಭವದಲ್ಲಿ ಪರಸ್ಪರ ಸಂಬಂಧವುಳ್ಳ ಪ್ರತಿರೂಪಗಳು ಒಂದು ಸಂದರ್ಭವನ್ನು ರೂಪಿಸುತ್ತವೆ. ಅವನ್ನೆಲ್ಲ ಒಟ್ಟಾಗಿ ಎತ್ತಿ ಹಿಡಿದುಕೊಂಡು ಅದಕ್ಕೊಂದು ನಿರ್ದಿಷ್ಟ ಅರ್ಥವನ್ನು ಕೊಡುತ್ತವೆ ಮತ್ತು ಈ ಅರ್ಥದ ಅಂಚೇ ಸಂವೇದನೆಗಳನ್ನು ಬರೀ ಸಂವೇದನೆಗಳನ್ನಾಗಿ ಮಾಡದೆ ಸಂಕೇತಗಳನ್ನಾಗಿ ಮಾಡುತ್ತದೆ. ಈ ತೆರದಲ್ಲಿ ಒಂದು ಕಿತ್ತಳೆಯ ಹಣ್ಣಿನ ಬಣ್ಣದ ಮತ್ತು ಅದರ ಹೊಳಪಿನ ಕೆಲವು ಪ್ರತ್ಯಕ್ಷಾನುಭವವನ್ನು ನಾವು ಪಡೆದಾಗ ಸಾಂದರ್ಭಿಕವಾದ ವಾಸನೆ ಮತ್ತು ರುಚಿಯ ಪ್ರತಿರೂಪಗಳೂ ಸಹ ಉದ್ಬೋಧನಗೊಳ್ಳುತ್ತವೆ; ಇವುಗಳು ಆ ವಸ್ತುವಿನ ನೆಲೆಯನ್ನು ಪತ್ತೆ ಮಾಡಲು ಅಥವಾ ಅದನ್ನು ಗುರುತಿಸಲು ನಮಗೆ ನೆರವಾಗುತ್ತವೆ; ಎಂದರೆ, ರಸವತ್ತಾದ ಒಂದು ಕಿತ್ತಳೆ ಹಣ್ಣಿನ ಅರ್ಥವನ್ನು ನಮ್ಮ ಕಣ್ಣಿನ ಸಂವೇದನೆಗಳೇ ಕೊಡುತ್ತವೆ. ಟಿಚ್ನರನ ಅಭಿಪ್ರಾಯದ ಪ್ರಕಾರ ಪ್ರತ್ಯಕ್ಷಾನುಭೂತಿಗಳು ಅರ್ಥವತ್ತಾಗಿವೆಯೇ ಹೊರತು ಬರಿ ಇಂದ್ರಿಯಾನುಭವಗಳಲ್ಲ. ಬೋರಿಂಗ್ ಹೇಳಿರುವಂತೆ ಒಂದು ಅರ್ಥವನ್ನು ನಿರೂಪಿಸಲು ಎರಡು ಮಾನಸಿ ಪ್ರಕ್ರಿಯೆಗಳು ಬೇಕು. ಒಂದು ಪ್ರತ್ಯಕ್ಷಾನುಭವ; ಮತ್ತೊಂದು ಪ್ರತಿರೂಪ. ಸಂವೇದನೆ ಅಥವಾ ಪ್ರತಿರೂಪ ಜೊತೆಗೂಡಿದ್ದೇ ಆದರೆ ಒಂದು ಪ್ರತ್ಯಕ್ಷಾನುಭವದ ರೂಪದಲ್ಲಿ ಅಥವಾ ಒಂದು ಭಾವದ ರೂಪದಲ್ಲಿ ಅದಕ್ಕೆ ಅರ್ಥಪ್ರಾಪ್ತವಾಗುತ್ತದೆ.

ನೋಬಲ್ ಎಂಬಾತ ಎರಡು ಶಬ್ದಗಳ ನಡುವೆ ಇರುವ ವಿಲಕ್ಷಣವಾದ ಸಂಬಂಧವೇ ಅರ್ಥವೆಂದು ಪರಿಭಾವಿಸಿಕೊಂಡು, ಅರ್ಥದ ವಾಚ್ಯಾರ್ಥಗಳಿಗಿಂತಲೂ ಲಕ್ಷಾರ್ಥಗಳಿಗೇ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟಿದ್ದಾನೆ. ಎಂದರೆ, ಅನೇಕ ವ್ಯಂಗ್ಯಾರ್ಥಗಳುಳ್ಳ ಶಬ್ದ ಅದಕ್ಕಿಂತ ಕಡಿಮೆ ವ್ಯಂಗ್ಯಾರ್ಥವುಳ್ಳ ಶಬ್ದಕ್ಕಿಂತ ಹೆಚ್ಚು ಅರ್ಥವತ್ತಾದುದು ಎಂದು ಭಾವಿಸಿದ್ದಾನೆ. ಆತ ತಾತ್ಪರ್ಯದ ತಾರ್ಕಿಕ ಸಂಬಂಧ ಮಾನಸಿಕವಾದ ಸಾಂಬಂಧಿಕ ಪ್ರಕ್ರಿಯೆಯೊಡನೆ ಸಂಗತವಾಗುತ್ತದೆಯೆಂದು ವಾದಿಸಿದ. ಒಂದು ಅರ್ಥವನ್ನು ಅದಕ್ಕಿಂತಲೂ ಹೆಚ್ಚಾಗಿ ಅದರ ಪೂರ್ಣತೆಯನ್ನು ಆ ಪದ ಕೊಡುವ ಸಂಬಂಧಗಳನ್ನು ಎಣಿಕೆ ಮಾಡಿ ಅಳೆಯಲು ಪ್ರಯತ್ನಿಸಿದ.

ಮತ್ತೊಂದು ಗಮನಾರ್ಹವಾದ ಪ್ರಯತ್ನ ಓಸಗುಡ್‍ನ ಶಬ್ದಾರ್ಥ ವ್ಯತ್ಯಾಸಗಳನ್ನು ಅಳೆಯುವ ಮಾಪಕ. ಇದು ಭಾವನೆಗಳ ಅರ್ಥದ ಅಳತೆಯನ್ನು ಪಡೆಯಲು ಯತ್ನಿಸುತ್ತದೆ. ಈ ಮಾಪನ ಪ್ರಕ್ರಿಯೆಯ ತಳದಲ್ಲಿ ಯಾವ ಭಾವವಿದೆಯೆಂದರೆ, ಪದಾರ್ಥದಲ್ಲಿ ಅದಕ್ಕಿಂತ ಸೂಕ್ಷ್ಮವಾದ ವಿವರಿಸಲು ಕಷ್ಟವಾದ ಅರ್ಥಗಳೂ ಇವೆ ಎಂಬುದು. ಈ ಒಳಾರ್ಥಗಳನ್ನು ಅಳೆಯುವುದಕ್ಕೆ ಒಂದು ಹೊಸ ದಾರಿಯನ್ನು ಹಿಡಿಯಲಾಗಿದೆ. ಉದಾಹರಣೆಗೆ, ಅಡಿಗೆ ಮನೆ ಎಂಬುದಕ್ಕೆ ಇಪ್ಪತ್ತು ಗುಣವಾಚಕಗಳನ್ನು ಉಪಯೋಗಿಸಬಹುದು. ಒಳ್ಳೆಯದು-ಕೆಟ್ಟದು, ದೊಡ್ಡದು-ಚಿಕ್ಕದು, ಶುಚಿಯಾದ್ದು-ಕೊಳಕಾದ್ದು-ಹೀಗೆ. ಈ ಭಿನ್ನ ಭಿನ್ನ ಗುಣವಾಚಕಗಳ ಸಪ್ತಾಂಶಿಕ ಸೂಚನಾನಕ್ಷೆಯಲ್ಲಿ ಯಾವ ಅಂಕಗಳನ್ನು ಕೊಡುತ್ತವೋ ಅವುಗಳ ಮೊತ್ತದ ನಮೂನೆ ಅವನ ಅರ್ಥವನ್ನು ಸೂಚಿಸುತ್ತದೆ. ಇದರ ಮೇಲಿನ ಸಾಮಾನ್ಯ ಟೀಕೆ ಏನೆಂದರೆ, ಈ ಶಬ್ದಾರ್ಥ ವ್ಯತ್ಯಾಸಗಳ ಪ್ರಮಾಣಗಳು ಅದರ ಅರ್ಥವನ್ನು ತಿಳಿಸದೆ ಅದರ ಕೇವಲ ರಾಗೋದ್ಬೋಧಕ ಪ್ರಭಾವವನ್ನು ತಿಳಿಸುತ್ತವೆ ಎಂದು.

ಅರ್ಥವನ್ನು ಅಳೆಯುವ ಈ ಪ್ರಯತ್ನಗಳು ವಿಶ್ವಾಸಾರ್ಹವಾಗಿಯೂ ಉಪಯುಕ್ತವಾಗಿಯೂ ಇವೆ. ಅರ್ಥಕ್ಕೆ ಅನೇಕ ಪರಿಮಾಣಗಳಿವೆ. ಆದ್ದರಿಂದ ಅದನ್ನು ಅಳೆಯುವ ಕ್ರಮಗಳು ಮುಂದುವರಿಯಬೇಕು. ಅರ್ಥದ ಅರ್ಥಗಳನ್ನು ವಿಂಗಡಿಸಿ ನೋಡಿ ತಿಳಿಯದಿದ್ದರೆ ಬಹುಮಟ್ಟಿನ ಅಪಾಯ, ವೈಮನಸ್ಯ, ತೊಂದರೆಗಳು ತಪ್ಪಿದ್ದಲ್ಲ. 				   
 (ವಿ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ